ಗಂಗಾ ನದಿ

ಉತ್ತರ ಭಾರತದ ದೊಡ್ಡ ನದಿ, ಹಿಂದುಗಳಿಗೆ ಪವಿತ್ರವಾದ ನದಿ. 1557 ಮೈ. ಉದ್ದವಿದೆ. ಇದರ ಜಲಾನಯನ ಭೂಮಿಯ ವಿಸ್ತೀರ್ಣ 4,19,000 ಚ.ಮೈ.; ಇದು ಏಷ್ಯದ ಅತ್ಯಂತ ವಿಸ್ತಾರವೂ ಜನನಿಬಿಡವೂ ಆದ ನದೀಬಯಲುಗಳಲ್ಲೊಂದು. ಗಂಗಾ ನದಿ ಮಧ್ಯ ಹಿಮಾಲಯ ಪ್ರದೇಶದಿಂದ ಆಗ್ನೇಯಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದಕ್ಕೆ ವಿಷ್ಣುಪಾದಿ, ಜಾಹ್ನವಿ, ಮಂದಾಕಿನೀ, ಭಾಗಿರಥೀ, ವರನದಿ, ತ್ರಿಪಥಗಾ, ಹರಶೇಖರಾ ಎಂದು ಅನೇಕ ಹೆಸರುಗಳುಂಟು. ಗಂಗೆಯನ್ನು ದೇವಿಯೆಂದು ಎಷ್ಟೋ ದೇವಾಲಯಗಳಲ್ಲಿ ಪೂಜೆ ಮಾಡುತ್ತಾರೆ. ಗಂಗೆಯ ದೇವತಾಮೂರ್ತಿಗಳಲ್ಲಿ ಮತ್ಸ್ಯ, ಮಕರ, ಪದ್ಮ, ಕಲಶ ಲಾಂಛಗಳಿರುತ್ತವೆ. ಪಾಪವನ್ನು ತೊಳೆಯುವ ಶಕ್ತಿ ಗಂಗೆಯ ವೈಶಿಷ್ಟ್ಯವೆಂದು ಅನೇಕರ ನಂಬಿಕೆ. ಗಂಗಾನದಿಯನ್ನು ಗಂಗಾಮಾಯಿ, ಗಂಗಾಜಿ ಎಂದು ಭಕ್ತಿಯಿಂದ ಕರೆಯುವುದಂಟು. ಗಂಗಸ್ನಾನದ ಪುಣ್ಯವನ್ನು ಪುರಾಣಗಳೆಲ್ಲ ಕೊಂಡಾಡುತ್ತಾವೆ. ವೈಶಾಖ ಸಪ್ತಮಿಯನ್ನು ಗಂಗಾಸಪ್ತಮಿಯೆನ್ನುವರು. ಅಂದು ಶ್ರದ್ಧಾನ್ವಿತರು ಸ್ನಾನ ಮಾಡಿ ಮುಡಿ ಒಪ್ಪಿಸುತ್ತಾರೆ. ಶುಭಕರ್ಮಗಳಲ್ಲೆಲ್ಲ ಗಂಗೆಯನ್ನು ಪೂಜಿಸುವ ಪದ್ಧತಿಯುಂಟು. ಗಂಗಾತೀರದ ಮರಣ ಪುಣ್ಯಕರವೆಂಬ ನಂಬಿಕೆಯಿದೆ.

	ಉಗಮ, ಹರಿವು : ಮಹಾಭಾರತದ ಪ್ರಕಾರ ಗಂಗಾನದಿ ಉಗಮಿಸುವುದು ಬಿಂದುಸಾರದಲ್ಲಿ. ಜೈನಗ್ರಂಥವಾದ ಜಂಬುದ್ದೀವ-ಪಣ್ಣತ್ತಿಯ ಪ್ರಕಾರ ಪದ್ಮಹ್ರದ ಇದರ ಉಗಮಸ್ಥಳ, ಅನೋತತ್ತ ಸರೋವರದ ದಕ್ಷಿಣಮುಖದಲ್ಲಿ ಗಂಗೆ ಉಗಮಿಸುತ್ತದೆಯೆಂಬುದಾಗಿ ಪಾಳಿ ಗ್ರಂಥಗಳಿಂದ ಗೊತ್ತಾಗುತ್ತದೆ. ಆಧುನಿಕ ಭೋಗೋಳಶಾಸ್ತ್ರಜ್ಞರ ಪ್ರಕಾರ ಉತ್ತರ ಪ್ರದೇಶದ ತೆಹ್ರಿ-ಘರ್‍ವಾಲ್ ಜಿಲ್ಲೆಯಲ್ಲಿ, ಗಂಗೋತ್ರಿಯ ಬಳಿ, ಹಿಮಾಲಯದ ಬರ್ಫಪೀಠವೊಂದರ ಬುಡದ ಮಂಜುಗುಹೆಯಲ್ಲಿ, ಭಾಗೀರಥಿಯ ಉಗಮವಾಗುತ್ತದೆ. ಇದು ಗಂಗಾನದಿಯ ತಲೆಯ ಭಾಗದ ಎರಡು ಮುಖ್ಯ ಝರಿಗಳಲ್ಲೊಂದು ; ಅವೆರಡರಲ್ಲಿ ಚಿಕ್ಕದು. ಮತ್ತೊಂದು ಶಾಖೆಯ ಹೆಸರು ಅಲಕನಂದಾ. ಇದರ ಉಗಮ ಟಿಬೆಟ್ ಗಡಿಯ ಬಳಿ. ಇವೆರಡೂ ಇನ್ನೂ ಹಲವು ಸಣ್ಣ ಹೊಳೆಗಳೂ ಹರಿದ್ವಾರಕ್ಕೆ 40 ಮೈ, ಮೇಲೆ, ದೇವಪ್ರಯಾಗದಲ್ಲಿ, ಕೂಡಿಕೊಳ್ಳುತ್ತವೆ. ಅಲ್ಲಿಂದ ಮುಂದಕ್ಕೆ ಹರಿಯುವ ನದಿಯೇ ಗಂಗಾ ಎಂದು ಹೆಸರು ತಳೆಯುತ್ತದೆ. ಡೆಹ್ರಾ ಡೂನಿನಿಂದ ಹರಿದ್ವಾರದ ವರೆಗೆ ನದಿಯ ಪ್ರವಾಹದ ವೇಗ ಬಲು ಹೆಚ್ಚು. ಹರಿದ್ವಾರದ ಬಳಿ ಅದು ಮೈದಾನವನ್ನು ಪ್ರವೇಶಿಸುತ್ತದೆ. ಹರಿದ್ವಾರಕ್ಕೆ ಗಂಗಾದ್ವಾರವೆಂದೂ ಹೆಸರುಂಟು. ಮಂದಾಕಿನಿ ಎಂಬುದು ಅಲಕನಂದಾದ ಉಪನದಿಗಳಲ್ಲೊಂದು. ಘರ್‍ವಾಲಿನ ಕೇದಾರನಾಥದಲ್ಲಿ ಉಗಮಿಸುವ ಕಾಳಿಗಂಗಾವೇ ಇದು. ಗಂಗಾನದಿಯ ಪ್ರವಾಹ ವರ್ಷವೆಲ್ಲ ಏಕರೀತಿಯಾಗಿರುವುದಿಲ್ಲವಾದರೂ ಭಾರತದ ಇತರ ಹಲವು ನದಿಗಳಂತೆ ಇದು ತೀವ್ರವಾದ ಏರಿಳಿತಗಳಿಗೆ ಒಳಗಾಗಿರುವುದಿಲ್ಲ. ಮುಂಗಾರಿನ ಮಳೆಯ ನೀರಿನ ಜೊತೆಗೆ ಬೇಸಗೆಯಲ್ಲಿ ಹಿಮಾಲಯದ ಮಂಜು ಕರಗಿದ ನೀರೂ ಹರಿಯುತ್ತದೆ. 

	ಉತ್ತರ ಪ್ರದೇಶದ ಪಶ್ಚಿಮ ಮೈದಾನದಲ್ಲಿ ದಕ್ಷಿಣಾಭಿಮುಖವಾಗಿ ಹರಿಯುವ ನದಿ ಕಾನ್‍ಪುರದಿಂದ ಅಲಹಾಬಾದಿನ ವರೆಗೆ ಆಗ್ನೇಯ ದಿಶೆಯಲ್ಲಿ ಪ್ರವಹಿಸಿ. ಅಲ್ಲಿ ಯಮುನಾ ನದಿಯನ್ನು ಕೂಡಿಕೊಂಡು ಪೂರ್ವ ದಿಕ್ಕಿಗೆ ಹರಿದು, ವಾರಾಣಸಿಯ ಬಳಿ ಉತ್ತರದಿಂದ ಬರುವ ಘಾಘ್ರ ಮತ್ತು ದಕ್ಷಿಣದಿಂದ ಬರುವ ಸೋನ್ ನದಿಗಳಿಂದ ಕೂಡಿ ಬಿಹಾರದ ನಡುವೆ ಪೂರ್ವದ ಕಡೆಗೆ ಪ್ರವಹಿಸಿ, ಉತ್ತರದ ಕಡಿಯಿಂದ ಬರುವ ಗಂಡಕ್ ಮತ್ತು ಕೋಸಿ ನದಿಗಳನ್ನು ಸಂಗಮಿಸಿಕೊಳ್ಳುತ್ತದೆ. ಅಲ್ಲಿ ಇದು ಛೋಟಾನಾಗಪುರ ಪ್ರಸ್ಥಭೂಮಿಯನ್ನು ಬಳಸಿ ಆಗ್ನೇಯ ದಿಕ್ಕಿನಲ್ಲಿ ಪ್ರವಹಿಸಿ ಹಲವಾರು ಕವಲುಗಾಳಾಗಿ ಒಡೆದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಾಂಗ್ಲಾ ದೇಶದಲ್ಲಿ ಗಂಗಾ-ಪುತ್ರಾ ನದಿಗಳು ಒಂದಾಗುತ್ತವೆ. ಪದ್ಮಾ ನದಿ ಇವುಗಳ ಸಂಗಮದ ಪರಿಣಾಮ.

	ಗಂಗನದಿಯನ್ನು ಆದಿ, ಮಧ್ಯ ಮತ್ತು ಅಂತ್ಯ ಗಂಗಾ ಎಂದು ಸ್ಥೂಲವಾಗಿ ವಿಭಾಗಿಸಬಹುದು. ಉತ್ತರ ಪ್ರದೇಶದ ಪಶ್ಚಿಮಾರ್ಧದಲ್ಲಿರುವ ಭಾಗ ಆದಿ ಗಂಗಾ ಅದರ ಮುಖ್ಯ ಕೂಡು ನದಿಗಳಾದ ಘಾಘ್ರಾ ಮತ್ತು ಗೋಮತಿಗಳು ಮಧ್ಯ ಗಂಗಾ ಬಯಲಿನಲ್ಲಿ ಅದರೊಡನೆ ಸಂಗಮವಾಗುತ್ತದೆ. ಗಂಗಾನದಿಗೆ ಸೇರುವ ಕೂಡುನದಿಗಳೆಲ್ಲ ಲಘುಕೋನಗಳಲ್ಲಿ ಸಂಗಮಿಸುತ್ತವೆ. ಉಪನದಿಗಳು ಗರಿಯಂತೆ ಕೆದರಿಕೊಂಡಿವೆ. ಇವುಗಳ ಮರಳು ದಿಬ್ಬಗಳು ಮಳೆಗಾಲದಲ್ಲಿ ಮುಳುಗಿ ಹೋಗುತ್ತವೆ. ಈ ನದಿಗಳು ಬಳಸಿ ಹರಿಯುತ್ತವೆ. ಇವು ಆದಿಗಂಗಾ ಪ್ರದೇಶದ ಎಲ್ಲ ಉಪನದಿಗಳ ಸಾಮಾನ್ಯ ಲಕ್ಷಣಗಳು. ಗಂಗಾ ನದಿಯ ಪ್ರಮುಖ ಉಪನದಿಗಳಾದ ಯಮುನಾ, ರಾಮಗಂಗ, ಮತ್ತು ಘಾಘ್ರಾ ಇಡೀ ವರ್ಷ ತುಂಬಿ ಹರಿಯುವ ಹಿಮಾಲಯನ್ ನದಿಗಳು, ಘಾಘ್ರಾ ಮತ್ತು ಗೋಮತಿ ನದಿಗಳು ಅವಧ್ (ಅಯೋಧ್ಯಾ) ಮತ್ತು ಸರಯೂ ಪಾರ್ ಕಣಿವೆಗಳಲ್ಲೂ ರಾಮಗಂಗಾ ರೋಹಿಲ್ ಖಂಡದ ಬಯಲಿನಲ್ಲೂ ಹರಿಯುತ್ತವೆ. ಈ ಭಾಗದ ಮುಖ್ಯ ನೀರಾವರಿ ವ್ಯವಸ್ಥೆಯೆಂದರೆ ಹರಿದ್ವಾರದ ಬಳಿ ಗಂಗೆಯ ಬಲದಂಡೆಯಿಂದ ಹೊರಟು ಮಣಿಪುರದ ವರೆಗೆ ಸುಮಾರು 15.79 ಲಕ್ಷ ಎಕರೆಗಳಷ್ಟು ಕೃಷಿ ಭೂಮಿಗೆ ನೀರು ಒದಗಿಸುವ ಗಂಗಾನಾಲೆ, ಇದರಿಂದ ಸಹಾರನ್‍ಪುರ, ಮುಜಫ್ಫರ್ ನಗರ, ಬುಲಂದ್‍ಶಹರ್, ಮೀರತ್ ಏಟಾ, ಇಟಾವಾ, ಆಲೀಗಢ, ಮಥುರಾ, ಕಾನ್ಪುರ, ಮೈನ್‍ಪುರಿ, ಫರೂಕಾಬಾದ್ ಮತ್ತು ಫತೇಗಢ, ಜಿಲ್ಲೆಗಳೆಗೆ ಅನುಕೂಲವಾಗಿದೆ. ಗಂಗಾ ಮತ್ತು ಯಮುನಾ ನದಿಗಳು ಸಂಗಮಿಸುವುದು ಪ್ರಯಾಗದಲ್ಲಿ (ಅಲಹಾಬಾದ್).

	ಮಧ್ಯಗಂಗಾ ಬಯಲು ಭಾರತದ ಹೃದಯಭಾಗ. ಅದು ಉತ್ತರದ ಪ್ರದೇಶದ ಪೂರ್ವಾರ್ಧವನ್ನು, ಅಂದರೆ ಪೂರ್ಬಿಯ ಬಯಲು ಮತ್ತು ಬಿಹಾರ ರಾಜ್ಯದ ಬಹುಭಾಗವನ್ನು ಒಳಗೊಂಡಿದೆ. ಈ ಭಾಗದಲ್ಲೂ ಉಪನದಿಗಳು ಲಘುಕೋನಗಳಲ್ಲಿ ಹರಿದು ಗಂಗೆಯೊಡನೆ ಸಂಗಮವಾಗುತ್ತವೆ ; ಕೆಲವು ಅದಕ್ಕೆ ಸಮಾಂತರದಲ್ಲಿ ಹರಿಯುತ್ತವೆ. ಗಂಗಾ ನದಿ ಹೊತ್ತು ತಂದ ಮರಳು ಹಾಗೂ ಪುಡಿಗಲ್ಲುಗಳ ಸಮೇತ ಅದು ನಿಧಾವಾಗಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ಗಂಗಾ ನದಿಗೆ ದಕ್ಷಿಣದಲ್ಲಿರುವ ಗುಡ್ಡನಾಡುಗಳಿಗಿಂತ ಹಿಮಾಲಯದ ತಪ್ಪಲು ದೂರವಿರುವುದರಿಂದ ಅದರ ಉತ್ತರದ ಕೂಡುನದಿಗಳು ಸಮತಲ ಪ್ರಸ್ಥಭೂಮಿಗಳಲ್ಲಿ ಹೆಚ್ಚು ದೂರದಿಂದ ಬಳಸಿ ನಿಧಾನವಾಗಿ ಹರಿದು ಬರುತ್ತವೆ. ಅವುಗಳಲ್ಲಿ ಮುಖ್ಯವಾದವು ಗೋಮತಿ, ಘಾಘ್ರಾ, ಭಾಗಮತಿ ಮತ್ತು ಕೋಸಿ, ದಕ್ಷಿಣದ ಕೂಡುನದಿಗಳು ತಗ್ಗುಭೂಮಿಯತ್ತ ರಭಸದಿಂದ ಹರಿದು ಬರುತ್ತವೆ. ಗಂಗಾ ನದಿಯ ದಕ್ಷಿಣದ ದಂಡೆ ಕಂಕರು, ಜೆಲ್ಲಿ ಮತ್ತು ಬಲವಾದ ಬಂಡೆಗಳ ಸಾಲುಗಳಿಂದ ಕೂಡಿದೆ. ಮಿರ್ಜಾಪುರ, ವಾರಾಣಸಿ, ಪಾಟ್ನ ಮತ್ತು ಮುಂಗೇರ್ ಕಡೆ ಈ ಬಂಡೆಗಳ ಸಾಲು ಹೆಚ್ಚು. ಆದ್ದರಿಂದ ಅದರ ದಕ್ಷಿಣದ ದಂಡೆ ಉತ್ತರದ ದಂಡೆಗಿಂತ ಭದ್ರವಾಗಿದೆ. ಸರಯೂಪಾರ್ ನದಿಯೊಂದಿಗೆ ಕೂಡಿಕೊಂಡು ಬರುವ ಘಾಘ್ರ ಪಾಟ್ನದ ಪಶ್ಚಿಮಕ್ಕೆ ಛಪ್ರಾ ಬಳಿ ಗಂಗಾ ನದಿಯೊಂದಿಗೆ ಸಂಗಮವಾಗುತ್ತದೆ. ಹಿರಿಯ ಉಪನದಿಗಳು ಹರಿದುಬಂದು ಗಂಗೆಯೊಂದಿಗೆ ಸಂಗಮವಾಗುವ ಪ್ರದೇಶಗಳನ್ನೆಲ್ಲ ದೊ-ಅಬ್‍ಗಳೆಂದು ಕೆರೆಯುತ್ತಾರೆ. ಇಡೀ ಗಂಗಾ ಬಯಲು ಗಂಗಾ-ಯಮುನಾ ದೋ-ಅಬ್, ಗಂಗಾ-ಘಾಘ್ರ ದೋ-ಅಬ್, ಗಂಗಾ-ಸೋನ್ ದೋ-ಅಬ್, ಎಂದು ಮುಂತಾಗಿ ವಿಭಜಿತವಾಗಿವೆ. ಗಂಗಾ-ಘಾಘ್ರ ದೋ-ಅಬ್ ಪ್ರದೇಶದಲ್ಲಿ ಪ್ರವಹಿಸಿ ಗಂಗಾ ನದಿಯನ್ನು ನೇರವಾಗಿ ಸೇರುವ ನದಿಗಳಲ್ಲಿ ಗೋಮತಿ, ಛೋಟಿ ಸರಯು, ಮಾಂಗೈ ಬೇಸು ಮತ್ತು ಗಂಗಿ ಮುಖ್ಯವಾದುವು. ಉತ್ತರದಿಂದ ಹರಿದು ಗಂಗೆಯನ್ನು ಸೇರುವ ಘಾಘ್ರಾ, ರಪ್ತಿ, ಗಂಡಕ್ ಇವು ತಮ್ಮ ಪಾತ್ರಗಳನ್ನು ಬದಲಾಯಿಸುತ್ತಿರುತ್ತವೆ ; ಗಂಡಕ್ ಮತ್ತು ಪೂರ್ವಕ್ಕಿರುವ ಕೋಸಿ ನದಿಗಳ ನಡುವೆ ಹರಿಯುವ ಬಡೀಗಂಡಕ್ ನದಿ ಭಾಗಮತಿಯೊಂದಿಗೆ ಸಂಗಮಿಸಿ ಗಂಗೆಯಲ್ಲಿ ಲೀನವಾಗುತ್ತದೆ. ಹಿಮಾಲಯದ ಪೂರ್ವಭಾಗದಿಂದ ಇಳಿದು ಪೂರ್ಣಿಯ ಜಿಲ್ಲೆಯಲ್ಲಿ ಗಂಗೆಯನ್ನು ಸೇರುವ ಕೋಸಿ ಬಿಹಾರದ ಕಣ್ಣೀರಿನ ನದಿ ಎಂಬ ಹೆಸರು ಪಡೆದಿದೆ. ಅದು ಕಳೆದ ಎರಡು ಶತಮಾನಗಳಲ್ಲಿ ದರ್ಭಾಂಗ ಜಿಲ್ಲೆಯಲ್ಲಿ ಪೂರ್ಣಿಮ ನಗರದಿಂದ ಹಿಡಿದು ತಿಲ್‍ಜುಗ ವರೆಗಿನ ಪ್ರದೇಶದಲ್ಲಿ ಸುಮಾರು 120 ಕಿಮೀ.ದೂರ ಸರಿದುಬಂದಿದೆ. ಈ ನದಿಯನ್ನು ಪಳಗಿಸುವ ಉದ್ದೇಶದಿಂದಲೇ ಕೋಸಿ ಜಲಾಶಯ ಯೋಜನೆಯನ್ನು ಜಾರಿಗೆ ತರಲಾಗಿದೆ.

	ಮಧ್ಯಗಂಗಾ ದಕ್ಷಿಣದಿಂದ ಸ್ವೀಕರಿಸುವ ನದಿಗಳಲ್ಲಿ ಅತ್ಯಂತ ದೊಡ್ಡದು ಸೋನ್, ದಕ್ಷಿಣದ ನದಿಗಳು ಮಳೆಗಾಲದಲ್ಲಿ ತಮ್ಮ ಜಲಾನಯನ ಭೂಮಿಯಲ್ಲಿ ಸಂಗ್ರಹವಾಗುವ ನೀರಿನೊಂದಿಗೆ ರಭಸವಾಗಿ ಹರಿಯುತ್ತವೆ. ಇವು ವಿಶಾಲವಾದ ಹಾಗೂ ಆಳವಿಲ್ಲದ ನದಿಗಳಾದ ಪ್ರಯುಕ್ತ ಬೇಸಗೆಯಲ್ಲಿ ಅಲ್ಲಲ್ಲಿ ಮಡುವುಗಳಾಗಿ ನಿಲ್ಲುತ್ತವೆ. ವಿಂಧ್ಯಪರ್ವತಗಳ ಕಡೆಯಿಂದ ಉತ್ತರಾಭಿಮುಖವಾಗಿ ಹರಿದು ಗಂಗಾ ನದಿಯನ್ನೂ ಸೇರುವ ನದಿಗಳು ಕರ್ನೌಟಿ, ಓಜ್ನಾಲ, ಖೇಜೂóರಿ ಜಾತರ್, ಜಾರ್ಗೋ ಮತ್ತು ಸೋನ್ ನದಿಯ ಪೂರ್ವಕ್ಕೆ ಛೋಟಾನಾಗಪುರ ಪ್ರಸ್ಥಭೂಮಿಗೆ ಉತ್ತರದಲ್ಲಿ ಎತ್ತರಕ್ಕೆ ಹರಿದು ಗಂಗಾ ನದಿಯನ್ನು ಸೇರುವ ನದಿಗಳಲ್ಲಿ ಪ್ರಮುಖವಾದುವು 
ಪುನ್‍ಫುನ್, ಮೋಹಿನಿ ಮತ್ತು ಚಂದನ್, ಪ್ರವಾಹಕಾಲದಲ್ಲಿ ಗಂಗಾ ನದಿಯ ನೀರು ಈ ನದಿಗಳ ನೀರನ್ನು ಒತ್ತರಿಸಿ, ಅವುಗಳ ಅಕ್ಕಪಕ್ಕದ ಪ್ರದೇಶಗಳೆಲ್ಲ ಜಲಾವೃತ ವಾಗಿರುತ್ತವೆ. 

	ಗಂಗಾ ನದಿಯ ಅಂತ್ಯಭಾಗ ಪೂರ್ಣಿಯ ಜಿಲ್ಲೆಯ ಕೃಷ್ಣಗಂಜ್ (ಪುರಿಲಿಯಾ ಜಿಲ್ಲೆ ಮತ್ತು ಡಾರ್ಜೀಲಿಂಗ ಜಿಲ್ಲೆಯ ಪರ್ವತ ಭಾಗಗಳ ವಿನಾ) ಇಡೀ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಬಹು ಭಾಗಗಳನ್ನು ಒಳಗೊಂಡಿದೆ. ಈ ಇಡೀ ಪ್ರದೇಶ ಗಂಗಾ ನದಿಯ ಮುಖಜಭೂಮಿಯೆಂದು ಪರಿಗಣಿತ ವಾಗಿದ್ದರೂ ರಾಜ್ ಮಹಲ್-ಗಾರೋ ಪ್ರದೇಶವೇ ವಾಸ್ತವವಾಗಿ ಅದರ ಮುಖಜ ಭೂಮಿ ಇದು ಬಹುಶಃ ಪ್ರಪಂಚದ ಅತ್ಯಂತ ದೊಡ್ಡನದಿ ಮುಖಜಭೂಮಿ.

	ಗಂಗಾ ನದಿ ಈ ಭಾಗದಲ್ಲಿ ಅನೇಕ ಶಾಖೆಗಳಾಗಿ ಒಡಯುತ್ತದೆ ಹಲವಾರು ಉಪನದಿಗಳೂ ಬಂದು ಸೇರುತ್ತವೆ. ಇವು ದಕ್ಷಿಣ ದಿಕ್ಕಿಗೆ ಹರಿಯುತ್ತವೆ. ಬತ್ತಿಹೋದ ನದಿ ಭಾಗ ; ಸುಂದರಬನದ ಮುಖಜಭೂಮಿ ; ಬೀರ್ ಭೂಮ್, ಬರ್ದ್‍ವಾನ್, ಮಿಡ್ನಾಪುರ, ಹೂಗ್ಲಿ ಮತ್ತು ಹೌರ ಜಿಲ್ಲೆಗಳ ಫಲವತ್ತಾದ ಭೂಮಿ-ಇವು ಈ ನದೀಮುಖಜಭೂಮಿಯ ಮುಖ್ಯ ನದಿಗಳು.

	ಗಂಗಾ ನದಿಯ ಶಾಖೆಗಳಲ್ಲಿ ಪದ್ಮಾ ಮತ್ತು ಹೂಗ್ಲಿ ದೊಡ್ಡವು. ಹಿಮಾಲಯದ ಕಡೆಯಿಂದ ಮಹಾನಂದ, ಕರತೋಯ, ತೀಷ್ಟ, ಸಂಕೋಶ್ ಮೊದಲಾದ ನದಿಗಳು ಹರಿದುಬರುತ್ತವೆ.; ಭಾಗೀರಥಿ ಮತ್ತು ಹೂಗ್ಲಿ ನದಿಗಳನ್ನು ಕೂಡುವ ಮಯೂರಾಕ್ಷಿ, ದಾಮೋದರ್, ದ್ವಾರಕೇಶ್ವರ ನದಿಗಳು ರಭಸದಿಂದ ಹರಿದು ಬರುತ್ತವೆ. ಪದ್ಮಾ ಹಾಗೂ ಹೂಗ್ಲಿಗಳ ನಡುವಣ ಭಾಗ ನದೀಕವಲುಗಳ ಪ್ರದೇಶವಾಗಿದ್ದು, ಅಲ್ಲಿ ಜೌಗು ಹೆಚ್ಚು. ಗಂಗಾನದಿಯ ಮುಖ್ಯ ಶಾಖೆಯಾದ ಹೂಗ್ಲಿಯೂ ಹಲವು ಕವಲುಗಳೂ ಸುಂದರಬನಗಳತ್ತ ಸಾಗಿ, ಸಾಗರದ್ವೀಪದ ಬಳಿ ಬಂಗಾಳ ಕೊಲ್ಲಿಗೆ ಬೀಳುತ್ತದೆ. ಗಂಗಾನದಿಯ ಇನ್ನೊಂದು ಶಾಖೆ ಪದ್ಮಾ. ಅದು ಬಂಗ್ಲಾ ದೇಶದ ಗಡಿಯನ್ನೂ ಪ್ರವೇಶಿಸಿ ಬ್ರಹ್ಮಪುತ್ರಾ ನದಿಯೊಂದಿಗೆ ಕೂಡಿಕೊಂಡು ಇಳಿದು ಚಿತ್ತಗಾಂಗ್‍ಗೆ ಉತ್ತರದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕಲ್ಕತ್ತ. ಇರುವುದು ಹೂಗ್ಲಿಯ ದಂಡೆಯ ಮೇಲೆ, ನದಿಯ ಮೇಲಿನಿಂದ ಕಲ್ಕತ್ತ ಬಂದರಿಗೆ ನಿರಂತರ ತೊಂದರೆಯುಂಟು. ಗಂಗಾನದಿಯ ಕೆಳಭಾಗದ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚು.

	ಸಂಗಮಗಳು : ಧರ್ಮಶ್ರದ್ಧೆಯುಳ್ಳ ಜನ ಗಂಗಾನದಿಯ ಉದ್ದಕ್ಕೂ ಇರುವ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗುತ್ತಾರೆ : ಗಂಗಾ ನದಿಯ ಸಂಗಮಸ್ಥಳಗಳ ಹಾಗೂ ಪುಣ್ಯಕ್ಷೇತ್ರಗಳ ಪೈಕಿ ತೆಹ್ರಿ. ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ಬದರೀನಾಥ. ಕೇದಾರನಾಥ ಇವು ಹಿಮಾಲಯ ಪರ್ವತ ಪ್ರದೇಶಕ್ಕೆ ಸೇರಿದವು. ಋಷಿಗಂಗಾ ಮತ್ತು ವಿಷ್ಣುಗಂಗಾ ಸಂಗಮವಾಗುವ ಸ್ಥಳದಲ್ಲಿ ಬದರೀನಾಥ ಇದೆ. ದೇವ ಪ್ರಯಾಗ ಭಾಗೀರಥೀ ಮತ್ತು ಅಲಕನಂದಾ ನದಿಗಳ ಸಂಗಮಸ್ಥಳ. ಗಂಗಾ ಮತ್ತು ಯಮುನಾ ನದಿಗಳು ಅಲಹಾಬಾದಿನಲ್ಲಿ ಸಂಗಮಿಸುತ್ತವೆ. ಕಾಶಿ. ಪವಿತ್ರ ಕ್ಷೇತ್ರ. ಪಾಟ್ನದ ಪಶ್ಚಿಮಕ್ಕೆ ಛಪ್ರಾ ಬಳಿ ಘಾಘ್ರ ನದಿ ಗಂಗಾ ನದಿಯೊಡನೆ ಸಂಗಮವಾಗುತ್ತದೆ. ಗಂಗಾ ಮತ್ತು ಕೋಸಿ ನದಿಗಳು ಕುರಸೇಲಾದ ಬಳಿ ಕೂಡುತ್ತವೆ. ಗಂಗಾನದಿ ಸಮುದ್ರವನ್ನು ಸೇರುವ ಸ್ಥಳ. ಗಂಗಾಸಾಗರ ಅಥವಾ ಸಾಗರದ್ವೀಪ. ಪವಿತ್ರ ಇವಲ್ಲದೆ ಇನ್ನೂ ಹಲವಾರು ನದೀ ಸ್ಥಳಗಳು ಪವಿತ್ರ ಕ್ಷೇತ್ರಗಳಾಗಿವೆ.

	ವೇದಪುರಾಣಗಳಲ್ಲಿ : ಋಗ್ವೇದದಲ್ಲಿ ಗಂಗಾ ನದಿಯ ಬಗ್ಗೆ ಎರಡು ಕಡೆ ಉಲ್ಲೇಖವಿದೆ. ರಾಮಾಯಣದಲ್ಲಿ ಗಂಗೆಯ ವೃತ್ತಾಂತವನ್ನು ವಿಶ್ವಾಮಿತ್ರ ರಾಮಲಕ್ಷ್ಮಣರಿಗೆ ತಿಳಿಸುತ್ತಾನೆ. ವಿಯದ್ಗಂಗೆ ಅಥವಾ ದೇವಗಂಗೆ ವಿಷ್ಣುವಿನ ಪಾದದಿಂದ ಹರಿಯುವುದಾಗಿ ಪುರಾಣಗಳು ತಿಳಿಸುತ್ತವೆ. ಅಯೋಧ್ಯಾಪತಿಯಾದ ಸಗರನ ಯಾಗದ ಕುದುರೆಯನ್ನು ಇಂದ್ರ ಅಪಹರಿಸಿದ. ಸಗರನ 60,000 ಮಕ್ಕಳು ಅದನ್ನು ಹುಡುಕಲು ಹೊರಟು ಕಪಿಲನ ಕೋಪಕ್ಕೆ ತುತ್ತಾಗಿ ಭಸ್ಮವಾದರು ಋಷಿಯ ಕೋಪಾಗ್ನಿಗೆ ತುತ್ತಾದ ತನ್ನ ಪೂರ್ವಜರಿಗೆ ಮುಕ್ತಿ ದೊರಕಿಸಲು ದಿಲೀಪನ ಮಗನಾದ ಭಗೀರಥ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಗಂಗೆಯನ್ನು ಅವರ ಭಸ್ಮದ ಮೇಲೆ ಹರಿಸಲು ಆಕೆಯನ್ನು ಭೂಲೋಕಕ್ಕೆ ತರಿಸಿದ. ಇದರಿಂದ ಗಂಗಾನದಿಗೆ ಭಾಗೀರಥೀ ಎಂಬ ಹೆಸರಾಯಿತು. ಗಂಗಾ ತನ್ನನ್ನು ಭೂಲೋಕಕ್ಕೆ ತರಿಸಿದ ಕಾರಣದಿಂದ ಕುಪಿತಳಾಗಿ ರಭಸದಿಂದ ಇಳಿಯಲು ಅವರ ರಭಸದಿಂದ ಭೂಮಿಯನ್ನು ರಕ್ಷಿಸಲು ಶಿವ ಅವಳನ್ನು ತನ್ನ ಜಟೆಯಲ್ಲಿ ಹಿಡಿದು ನಿಲ್ಲಿಸಿದ. ಇದರಿಂದ ಶಿವನಿಗೆ ಗಂಗಾಧರನೆಂಬ ಹೆಸರಾಯಿತು. ಗಂಗೆ ಶಿವನ ಜಟೆಯಿಂದ ಸಪ್ತ ನದಿಗಳಾಗಿ ಹರಿದಳೆಂದು ಹೇಳುತ್ತಾರೆ. ಗಂಗೆ ವಿಂದು ಸರೋವರದಿಂದ ಹಾಗೆ ಹರಿಯುತ್ತಾಳೆಂಬ ಪ್ರತೀತಿಯೂ ಉಂಟು. ಆದರೆ, ಈ ಸರೋವರದ ಯಾವುದೆಂಬುದು ತಿಳಿದಿಲ್ಲ. ಈ ಸಪ್ತನದಿಗಳಲ್ಲಿ ಭೌಗೋಳಿಕವಾಗಿ ತಿಳಿದಿರುವುದು ಗಂಗಾ ಮತ್ತು ಸಿಂಧೂ ಎರಡು ಮಾತ್ರ. ಭಗೀರಥನೊಡನೆ ಹೊರಟ ಗಂಗಾ ನದಿ ಜುಹ್ನು ಋಷಿಯ ಆಶ್ರಮವನ್ನು ಪ್ರವೇಶಿಸಲು ಜುಹ್ನು ಕೋಪಗೊಂಡು ಗಂಗೆಯನ್ನು ಅಪೋಶನ ತೆಗೆದುಕೊಂಡ. ಬ್ರಹ್ಮನಲ್ಲಿ ಭಗೀರಥ ಮೊರೆಯಿಡಲು ಜುಹ್ನು ಕೃಪೆ ತೋರಿ ತನ್ನ ಕಿವಿಯಿಂದ ಗಂಗೆಯನ್ನು ಹೊರಬಿಟ್ಟ. ಇದರಿಂದ ಗಂಗೆಗೆ ಜಾಹ್ನವೀ ಎಂಬ ಹೆಸರಾಯಿತು. ಕೊನೆಗೆ ಭಗೀರಥ ಗಂಗೆಯೊಡನೆ ಸಾಗರವನ್ನು ಸಮೀಪಿಸಿ. ಸಗರನ ಮಕ್ಕಳು ಮೃತರಾದ ಸ್ಥಳವನ್ನು ಮುಟ್ಟಲು ಗಂಗಾ ಅವರ ಮೇಲೆ ಹರಿದು ಸಾಗರವನ್ನು ಸೇರಿದಳು. ಬಂಗಾಳ ಕೊಲ್ಲಿಯ ಸಾಗರದ್ವೀಪ ಇಂದಿಗೂ ಒಂದು ಯಾತ್ರಸ್ಥಳ.

	ಗಂಗಾ ಹಿಮವತ್‍ರಾಜನ ಮತ್ತು ಮೀನಾದೇವಿಯ ಮಗಳು. ಉಮಾ ಆಕೆಯ ಸೋದರಿ. ಗಂಗಾ ಶಂತನು ಮಹಾರಾಜನ ಪತ್ನಿಯಾಗಿ ಭೀಷ್ಮನನ್ನು ಪಡೆದಳು. ಆದ್ದರಿಂದ ಭೀಷ್ಮನಿಗೆ ಗಾಂಗೇಯನೆಂದು ಹೆಸರು. ವಿಚಿತ್ರ ಪರಿಸ್ಥಿತಿಗಳಿಂದಾಗಿ ಗಂಗಾ ಕುಮಾರಸ್ವಾಮಿಯ (ಕಾರ್ತಿಕೇಯನ) ತಾಯಿಯಾಗಬೇಕಾಗಿ ಬಂದ ಕಾರಣ ಆಕೆಯನ್ನು ಕುಮಾರಸೂ ಎಂದು ಕರೆಯಲಾಗಿದೆ. ಗಂಗೆಗೆ ಭದ್ರ ಸೋಮ, ದೇವಭೂತಿ, ಹರಿಶೇಖರಾ, ಮಂದಾಕಿನೀ ಮೊದಲಾದ ಹೆಸರುಗಳೂ ಇವೆ.

	ಇತಿಹಾಸ : ಆದಿಗಂಗಾ ಬಯಲು ಆರ್ಯರ ಸಪ್ರಸಿಂಧು ನಾಡಿನ ಪೂರ್ವ ಭಾಗ ; ಕುರು ಪಾಂಚಾಲ ದೇಶ. ಪ್ರಸಿದ್ಧ ಹಸ್ತಿನಾವತಿ ಮತ್ತು ಇಂದ್ರಪ್ರಸ್ಥ ನಗರಗಳಿದ್ದ ಭಾಗ. ಇಂದಿನ ಸೀತಾಪುರ ಜಿಲ್ಲೆಯ ದಟ್ಟಡವಿ ಹಿಂದಿನ ನೈಮಿ ಷಾರಣ್ಯ. ಈಗಿನ ಉನ್ನಾವೊ ಜಿಲ್ಲೆ ಮಹಾಭಾರತದ ಖಾಂಡವನ ಮತ್ತು ಗಂಗಾತಟದ ವಾಲ್ಮೀಕಿ ಆಶ್ರಮವಿದ್ದ ಭಾಗ. ಇದು ಮಹಾ ಕಾವ್ಯಗಳಲ್ಲಿ ಉಕ್ತವಾದ ಮಧ್ಯದೇಶ. ಇತಿಹಾಸದಲ್ಲಿ ಪ್ರಸಿದ್ಧವಾದ ಹಿಂದೂಸ್ತಾನ. ಗಂಗಾ ಬಯಲಿನ ಈ ಭಾಗದಲ್ಲಿ ಭಾರತದ ಕೊನೆಯ ಸಮ್ರಾಟ ಪೃಥ್ವೀರಾಜ ಚೌಹಣನಿಗೂ ಮಹಮ್ಮದ್ ಘೋರಿಗೂ ತಾನೇಶ್ವರದ ಬಳಿ ಯುದ್ಧ (1191) ನಡೆದು ದೆಹಲಿಯ ಸುಲ್ತಾನರ ಆಳ್ವಿಕೆ ಪ್ರಾರಂಭವಾಯಿತು. ಒಂದನೆಯ ಪಾನಿಪತ್ ಯುದ್ಧದಲ್ಲಿ ಮೊಗಲ ದೊರೆ ಬಾಬರನಿಗೆ ಸಿಂಹಾಸನದ ದೊರಕಿತು. (1526). ಎರಡನೆಯ ಪಾನಿಪತ್ ಯುದ್ಧದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಿರಗೊಂಡಿತು (1556). ಮೂರನೆಯ ಪಾನಿಪತ್ ಯುದ್ಧದಲ್ಲಿ ಮರಾಠರ ಬಲ ಕುಗ್ಗಿ ಬ್ರಿಟಿಷರು ವಶಪಡಿಸಿಕೊಂಡಿದ್ದು 1858ರಲ್ಲಿ. 

	ಮಧ್ಯಗಂಗಾ ಬಯಲಿನಲ್ಲಿ ಇತಿಹಾಸ ಪೂರ್ವ ಕಾಲದಿಂದ ಜನಜೀವನ ಸಾಗಿ ಬಂದಿದೆ. 10,000 ವರ್ಷಗಳ ಹಿಂದೆ ಈ ಭಾಗದಲ್ಲಿ ಜನಕ್ಕೆ ವ್ಯವಸಾಯ ತಿಳಿದಿತ್ತು. ನಿಷಾದ, ಕಿರಾತ, ದ್ರಾವಿಡ ಮತ್ತು ಹಿಂದೂ ಆರ್ಯರ ಸಾಂಸ್ಕøತಿಕ ಗುಂಪುಗಳಿಂದ ಈ ಭಾಗದಲ್ಲಿ ಭಾರತೀಯ ನಾಗರಿಕತೆ ಪ್ರಾರಂಭವಾಯಿತು. ಇಲ್ಲದ್ದ ಆರ್ಯೇತರರು ಸುಸಂಕ್ಕøತರಾಗಿದ್ದುದನ್ನು ಆರ್ಯರು ಇಲ್ಲಿಗೆ ಬಂದಾಗ ಕಂಡರು. ಋಗ್ವೇದದಲ್ಲಿ. ಗಂಗಾ, ಯಮುನಾ, ಸರಯೂ ನದಿಗಳ ಬಗ್ಗೆ ಉಲ್ಲೇಖವಿದೆ. ಅಲೆಮಾರಿ ಜೀವನ ನಡೆಸುತ್ತಿದ್ದ ಆರ್ಯರ ಗುಂಪುಗಳಲ್ಲಿ ಕುರು ಮತ್ತು ಪಾಂಚಾಲರು ಈ ಭಾಗದಲ್ಲಿ ರಾಜ್ಯ ಕಟ್ಟಿದರು. ಗಂಡಕೀ ನದಿ ವಿದೇಹಕ್ಕೂ ಕೋಸಲ ರಾಜ್ಯಕ್ಕೂ ಗಡಿಯಾಗಿತ್ತು. ಬುದ್ಧನ ಕಾಲದಲ್ಲಿ ಮಧ್ಯಗಂಗಾ ಬಯಲಿನಲ್ಲಿ ಪ್ರಸಿದ್ಧವಾಗಿದ್ದ ರಾಜ್ಯಗಳಲ್ಲಿ ಪ್ರಧಾನವಾದವು ಕೋಸಲ, ಶ್ರಾವಸ್ತಿ, ವತ್ಸ, ಕೌಶಾಂಬಿ, ಮಗಧ ಮತ್ತು ಅಂಗ. ಮಗಧ ರಾಜ್ಯದ ರಾಜಧಾನಿ ಪಾಟಲಿಪುತ್ತ ರಾಜಕೀಯ ಕೇಂದ್ರವಾಗಿತ್ತು. ಸುಂಗ, ಕಾನ್ವ, ಕುಷಾಣ ಮೊದಲಾದ ಸಂತತಿಗಳ ತರುವಾಯ 320 ರಲ್ಲಿ ಗುಪ್ತರು ಪಾಟಲಿಪುತ್ರದಲ್ಲಿ ಆಳುತ್ತಿದ್ದರು. ಪಾಟಲಿ ಪುತ್ರಕ್ಕೂ ವಂಗರಾಜ್ಯದ ತಾಮ್ರಲಿಪ್ತಿ ರೇವಿಗೂ ಸಂಪರ್ಕವಿತ್ತು. ಕೊನೆಕೊನೆಯ ಗುಪ್ತರು ಬಲಹೀನರಾಗಿ, ಮಗಧರಾಜ್ಯ ಬಂಗಾಳದ ಅರಸರ ವಶವಾಯಿತು. ಹರ್ಷನ ರಾಜ್ಯವೈಭವ ಕೇವಲ ನೆನಪಾಗಿ ಉಳಿಯಿತು. ಪಾಲರ 300 ವರ್ಷಗಳ ಆಳ್ವಿಕೆಯಲ್ಲಿ ಗುಪ್ತರ ಮಾದರಿಯ ಆಳ್ವಿಕೆಯೇ ಮುಂದುವರಿಯಿತು. ಮೊಗಲರ ಕಾಲದಲ್ಲಿ ಗಂಗಾ ಬಯಲಿನ ಪ್ರದೇಶ ಸುಭಾ ಅಥವಾ ಪ್ರಾಂತ್ಯಗಳಾಗಿ ವಿಂಗಡವಾಗಿ, ಸಭೆಗಳು ಸರ್ಕಾರ (ವಿಭಾಗ) ಹಾಗೂ ಜಿಲ್ಲೆಗಳಾಗಿ ವಿಭಜಿತವಾದುವು. 1857ರ ಬಂಡಾಯದಲ್ಲಿ ಗಂಗಾ ಬಯಲಿನ ಈ ಭಾಗದ ಪಟ್ಟಣಗಳು ಪ್ರಮುಖಪಾತ್ರ ವಹಿಸಿದ್ದುವು. ಭಾರತದ ಸ್ವಾತಂತ್ರ್ಯದ ತರುವಾಯ ರಾಜ್ಯಗಳ ಪುನರ್ವಿಂಗಡಣೆಯಲ್ಲಿ ಅದು ಉತ್ತರ ಪ್ರದೇಶಕ್ಕೆ ಸೇರಿತು.

	ಅಂತ್ಯಗಂಗಾ ಭಾಗ ವೇದಸಾಹಿತ್ಯದಲ್ಲಿ ವಂಗದೇಶವೆಂದು ಪ್ರಸಿದ್ಧವಾಗಿದೆ. ಐತರೇಯ ಬ್ರಾಹ್ಮಣದಲ್ಲಿ ಇದು ಪ್ರಾಚ್ಯ ಪ್ರದೇಶ ಭಾಗ ; ಕಿರಾತ, ಭರತ, ನಿಷಾಧ ಮತ್ತು ಸಾವರರ ನೆಲಿವೀಡು. 10ನೆಯ ಶತಮಾನದಲ್ಲಿ ಮಂಗೋಲ್ ಬುಡಕಟ್ಟಿನ ಜನ ಈ ಭಾಗಕ್ಕೆ ಚುಂಬಿ ಕಣಿವೆಯಿಂದ ಬಂದರು. ಅಲ್ಲಿಯ ವರೆಗೆ ಪುಂಡ್ರ, ಪಾಲ, ಸೇನ ಕಾಂಚ್ ಮೊದಲಾದ ಮನೆತನದವರು ಈ ಭಾಗವನ್ನು ಆಳಿದರು. ಅವರಲ್ಲಿ ಧರ್ಮಪಾಲ ಮತ್ತು ಬಲ್ಲಾಳಸೇನ ಪ್ರಸಿದ್ಧರು. ಗುಪ್ತರ ಆಳ್ವಿಕೆ ಕುರುಹು ದಿನಾಜ್‍ಪುರದಲ್ಲಿ ಕಂಡುಬರುತ್ತದೆ. ವಂದೇಶ ಹಿಂದೆ ಕಂಬುಜ (ಕಾಂಬೋಡಿಯ). ಸುವರ್ಣಭೂಮಿ (ಬರ್ಮ), ತಪ್ರೋಬಾನೆ (ಸಿಂಹಳ), ದಖನ್ ಮತ್ತು ಪರ್ಶಿಯ ಕೊಲ್ಲಿಯ ಪ್ರದೇಶಗಳೊಡನೆ ಸಂಪರ್ಕವಿತ್ತು. 13ನೆಯ ಶತಮಾನದಲ್ಲಿ ಇಲ್ಲಿ ಮುಸ್ಲಿಮರ ಆಳ್ವಿಕೆ ಪ್ರಾರಂಭವಾಯಿತು. ದೆಹಲಿಯ ಸುಲ್ತಾನರಿಗೂ ಮೊಗಲ್ ಸಮ್ರಾಟರಿಗೂ ಇಲ್ಲಿಯೆ ಮುಸ್ಲಿಂ ಅರಸರು ಅಧೀನರಾಗಿದ್ದರು. ಇಬ್ನ್ ಬತೂತ ಬಂಗಾಳವನ್ನು ನಿಸರ್ಗದ ತವರು, ಸಮೃದ್ಧಿಯ ನಾಡು ಎಂದು ಕರೆದಿದ್ದಾನೆ. 17ನೆಯ ಶತಮಾನದಲ್ಲಿ ಡಚ್ಚರು. (1632). ಫ್ರೆಂಚರು (1673-1676). ಡೇನಿಷಿರು (1676) ಮತ್ತು ಬ್ರಿಟಿಷರು (1690) ರಲ್ಲಿ ಕಾಲಿಟ್ಟರು. ಬ್ರಿಟಿಷರು ಪ್ಲಾಸಿ ಕದನದಲ್ಲಿ (1757) ಮುಸ್ಲಿಮರನ್ನು ಗೆದ್ದು, ಬಕ್ಸಾರ್ (1764) ಕದನದಲ್ಲಿ ಬಂಗಾಳವನ್ನು ವಶಪಡಿಸಿಕೊಂಡು ಕಲ್ಕತ್ತ ನಗರದಲ್ಲಿ ವಿಲಿಯಂ ಕೋಟೆಯನ್ನು ಕಟ್ಟಿಸಿದರು. ನವಾಬರ ಮತ್ತು ಬ್ರಿಟಿಷರು ದ್ವಿಪ್ರಭುತ್ವದಲ್ಲಿ ಬಂಗಾಳ ಕ್ಷಾಮಕ್ಕೀಡಾಯಿತು (1770). ಬ್ರಿಟಿಷರು 1912ರಲ್ಲಿ ಬಿಹಾರವನ್ನು ಬಂಗಾಳದಿಂದ ಪ್ರತ್ಯೇಕಿಸಿದರು. ತಮ್ಮ ಸಾಮ್ರಾಜ್ಯದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸಿದರು. ಕಲ್ಕತ್ತ ನಗರ ವಾಣಿಜ್ಯ ಕೇಂದ್ರವಾಗಿ ಉಳಿಯಿತು.

	ಪಟ್ಟಣಗಳು : ಗಂಗಾ ನದಿಯ ದಂಡೆಯ ಮೇಲೆ ಅನೇಕ ಪ್ರಸಿದ್ಧ ಪಟ್ಟಣಗಳೂ ಯಾತ್ರಾಸ್ಥಳಗಳೂ ಇವೆ. ಹಿಮಾಲಯದಲ್ಲಿ ಋಷಿಗಂಗಾ ಮತ್ತು ವಿಷ್ಣುಗಂಗಾ ಸಂಗಮವಾಗುವ ಸ್ಥಳದಲ್ಲಿ ಬದರೀನಾಥ. ಇದೆ. ಕೇದಾರನಾಥ ಇನ್ನೊಂದು ನಗರ. ದೇವಪ್ರಯಾಗ ಭಾಗೀರಥೀ ಮತ್ತು ಅಲಕನಂದಾ ನದಿಗಳು ಸಂಗಮವಾಗುವ ಕಡೆ ಇರುವ ನಗರ. ಹೃಷಿಕೇಷ ಮತ್ತು ಹರಿದ್ವಾರ ಇನ್ನೆರಡು ಪ್ರಸಿದ್ಧ ಯಾತ್ರಾಸ್ಥಳಗಳು. ಕಾನ್‍ಪುರ ಉತ್ತರಪ್ರದೇಶದ ಅತ್ಯಂತ ದೊಡ್ಡ ನಗರ. ಭಾರತದ ಮಹಾ ನಗರಗಳಲ್ಲಿ ಎಂಟನೆಯದು. ಇದು ಗಂಗಾ ನದಿಯ ಬಲದಂಡೆಯ ಮೇಲಿದೆ. ಅಲಹಾಬಾದ್ ಗಂಗೆ ಯಮುನೆಗಳ ಸಂಗಮದಬಳಿ ಇದೆ. ಅಂತಗಾರ್ಮಿನಿಯಾದ ಸರಸ್ವತಿಯೂ ಇಲ್ಲಿ ಸಂಗಮಿಸುತ್ತದೆಯೆಂದು ಪ್ರತೀತಿ. ಆದ್ದರಿಂದ ತ್ರೀವೇಣಿಸಂಗಮವೆಂದು ಪ್ರಸಿದ್ಧವಾಗಿದೆ. ಇದು ತೀರ್ಥರಾಜ. ಇಲ್ಲಿ ನಡೆಯುವ ಮಾಘಮೇಳ ವಾರ್ಷಿಕಜಾತ್ರೆಯಲ್ಲಿ ಸುಮಾರು ಲಕ್ಷ ಜನ ಸೇರುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಮಹಾಜಾತ್ರೆಯಲ್ಲಿ ಸುಮಾರು 40 ಲಕ್ಷ ಜನ ಸೇರುತ್ತಾರೆ. ಭಾರತದಲ್ಲೆಲ್ಲ ಇದೇ ಅತ್ಯಂತ ದೊಡ್ಡ ಜನಕೂಟ. ವಾರಾಣಸಿ ಇನ್ನೊಂದು ಪ್ರಸಿದ್ಧ ನಗರ. ಇದೇ ಕಾಶೀ ಅಥವಾ ವಿಶ್ವನಾಥಪುರಿ. ಇದು ಭಾರತೀಯ ಸಂಸ್ಕøತಿ ನಾಗರಿಕತೆ ಮತ್ತು ಶಿಕ್ಷಣಗಳ ಕೇಂದ್ರ. ಗಂಗಾ ನದಿಯ ಎಡದಂಡೆಯ ಮೇಲಿದೆ. ಗಂಗೆಯ ದಂಡೆಯ ಮೇಲೆ ವಾರಾಣ್ ಮತ್ತು ಅಸೀ ನದಿಗಳ ನಡುವೆ ಸ್ಥಾಪಿತವಾಗಿರುವುದರಿಂದ ಈ ಕ್ಷೇತ್ರಕ್ಕೆ ವಾರಾಣಸಿ ಎಂದು ಹೆಸರಾಯಿತು. ನಗರಕ್ಕೆ ಉತ್ತರದಲ್ಲಿ ಕೆಲವು ಮೈಲಿಗಳ ದೂರದಲ್ಲಿ ಸಾರಾನಾಥದ ಹಳೆಯ ನಿವೇಶನವಿದೆ. ಬುದ್ಧ ತನ್ನ ಧರ್ಮ ಪ್ರಸಾರವನ್ನು ಪ್ರಾರಂಭಿಸಿದ ಸ್ಥಳ ಇರುವುದು ಅಲ್ಲೇ. ಬಿಹಾರದ ಮಧ್ಯಗಂಗಾ ಹರಿವಿನಲ್ಲಿ ಗಂಗಾ ಬಲದಂಡೆಯಮೇಲೆ ಪಾಟ್ನ ನಗರವಿದೆ. ಇದಕ್ಕೆ 3,000 ವರ್ಷಗಳಷ್ಟು ದೀರ್ಘವಾದ ಇತಿಹಾಸವುಂಟು. ಇದು ಹಿಂದೆ ಮಗಧರಾಜ್ಯದ ಇನ್ನೊಂದು ಮುಖ್ಯ ನಗರ. ಇದು ಪ್ರಾಚೀನ ಚಂಪಾ ನಗರ ; ಅಂಗದೇಶದ ರಾಜಧಾನಿ. ಈಗ ಬಿಹಾರದ ಭಾಗಲ್‍ಪುರ ವಿಭಾಗದ ಮುಖ್ಯ ಪಟ್ಟಣ.

	ಅಂತ್ಯಗಂಗಾ ಪ್ರದೇಶದ ನಗರಗಳು ಹಲವಾರು. ಅವುಗಳಲ್ಲಿ ಮುಖ್ಯವಾದುವು ಬುರ್ಹಾಂಪುರ, ಸಿಲಿಗುರಿ, ಇಂಗ್ಲಿಷ್ ಬಜಾóರ್ ಶಾಂತಿಪುರ, ನವದ್ವೀಪ, ಕೃಷ್ಣನಗರ, ದುರ್ಗಾಪುರ, ಖರಗ್‍ಪುರ, ಹೂಗ್ಲಿ, ಚೀನ್‍ಸುರ, ಚಂದ್ರನಗರ, ಸೆರಾಂಪುರ, ರಿಷ್ರ ಮತ್ತು ಕೊನ್ನಾಗರ್. ಕಲ್ಕತ್ತ ಗಂಗಾನದೀ ಪ್ರದೇಶದ ಅತ್ಯಂತ ದೊಡ್ಡ ನಗರ. ಇದರ ಸುತ್ತ ಅನೇಕ ಉಪನಗರಗಳಿವೆ.

	ಆರ್ಥಿಕ ಉಪಯೋಗ : ಹರಿದ್ವಾರ ಮುಂದಕ್ಕೆ ದೋಣಿಗಳ ಸಂಚಾರ ಸಾಧ್ಯ. ಆದರೆ ನದೀಪ್ರವಾಹ ಒಂದೇ ಸಮನಾಗಿರುವುದಿಲ್ಲವಾದ್ದರಿಂದ ಸ್ಟೀಮರುಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಿಲ್ಲ. ಗಂಗಾನದಿಯ ಬಯಲು ಅತ್ಯಂತ ಫಲವತ್ತಾದ್ದು. ಗಂಗಾ ಮತ್ತು ಅದರ ಉಪನದಿಗಳು ನೀರಾವರಿಗೆ ಒದಗಿಬಂದಿವೆ. ಹರಿದ್ವಾರದಿಂದ ಹೊರಡುವ ಗಂಗಾ ಮೇಲ್ದಂಡೆ ಕಾಲುವೆಯಿಂದಲೂ ನರೋರ ಬಳಿ ಕಟ್ಟಲಾದ ಗಂಗಾ ಕೆಳದಂಡೆ ಕಾಲುವೆಯಿಂದಲೂ ವಿಸ್ತøತ ನೀರಾವರಿ ಸೌಲಭ್ಯ ಏರ್ಪಟ್ಟಿದೆ. ಹರಿದ್ವಾರದ ಬಳಿ ವಿದ್ಯುತ್ತಿನ ಉತ್ಪಾದನೆಯಾಗುತ್ತದೆ. ಕಾಲವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗದ ಎತ್ತರದಲ್ಲಿರುವ ಸ್ಥಳಗಳಲ್ಲಿ ಬಾವಿ ತೋಡಿ ವಿದ್ಯುತ್ತಿನ ಸಹಾಯದಿಂದ ಪಂಪುಗಳ ಮೂಲಕ ನೀರಾವರಿ ಸೌಲಭ್ಯ ಏರ್ಪಡಿಸಲಾಗಿದೆ.    	(ವಿ.ಜಿ.ಕೆ.; ಕೆ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ